ಜನಪ್ರಗತಿ

ಕನ್ನಡದ ಒಂದು ವಾರಪತ್ರಿಕೆ 1951ರ ಜುಲೈ 15ರಂದು ಬೆಂಗಳೂರಿನಲ್ಲಿ ಆರಂಭವಾಯಿತು. ಆ ಹೊತ್ತಿಗೆ ಮೈಸಿಂಡಿಯ ಇಂಗ್ಲಿಷ್ ವಾರಪತ್ರಿಕೆಯನ್ನು 12 ವರ್ಷಗಳಿಂದಲೂ ನಡೆಸಿಕೊಂಡು ಬಂದಿದ. ಡಿ. ಎನ್. ಹೊಸಾಳಿ ಇದನ್ನು ಆರಂಭಿಸಿದರು. ಪ್ರಾರಂಭದಲ್ಲಿ ಎನ್. ಎಸ್. ಸೀತಾರಾಮಶಾಸ್ತ್ರಿ ಇದರ ಸಂಪಾದಕರು. ಕೆಲವು ವರ್ಷಗಳ ಆನಂತರ ಹೊಸಾಳಿ ಅವರೇ ಸಂಪಾದಕರಾದರು. ಪತ್ರಿಕೆಯ ಧ್ಯೇಯಧೋರಣೆಗಳ ಬಗ್ಗೆ ಪ್ರಥಮ ಸಂಚಿಕೆಯಲ್ಲಿ ಹೀಗೆ ಬರೆಯಲಾಗಿದೆ ಜನಪ್ರಗತಿಯು ಯಾವ ಪೂರ್ವ ಸಿದ್ಧಾಂತಕ್ಕೂ ಕಟ್ಟುಬೀಳುವುದಿಲ್ಲ. ಪ್ರಗತಿದಾಯಕವಾದ ಎಲ್ಲ ಉತ್ಕøಷ್ಠ ವಿಚಾರಗಳಲ್ಲೂ ಕಾಲಧರ್ಮದ ನವ್ಯತೆಯನ್ನು ಅರಸುತ್ತದೆ.

ಜನಪ್ರಗತಿಯನ್ನು ಬಿ.ಎನ್. ಗುಪ್ತ ಅವರು 1959ರ ಮಾರ್ಚ್ 1ರಂದು ತೆಗೆದುಕೊಂಡು ಅವರೇ ಅದರ ಸಂಪಾದಕರು ಪ್ರಕಾಶಕರೂ ಆದರು. ಸ್ವಲ್ಪ ಕಾಲ ಹೊಸಾಳಿ ಮುದ್ರಣಾಲಯದಲ್ಲೇ ಪತ್ರಿಕೆ ಅಚ್ಚಾಗುತ್ತಿತ್ತು. ಅನಂತರ ಗುಪ್ತ ಪ್ರಗತಿ ಪ್ರಿಂಟರ್ಸ್ ಎಂಬ ಮುದ್ರಣಾಲಯ ಸ್ಥಾಪಿಸಿದರು. ಗುಪ್ತರ ಕೈಗೆ ಜನಪ್ರಗತಿ ಬಂದಮೇಲೆ ಅದು ವಿಶಿಷ್ಟ ರೀತಿಯಲ್ಲಿ ಏಳಿಗೆ ಕಂಡಿತು. ನಾಲ್ಕೇ ವರ್ಷಗಳಲ್ಲಿ ಪ್ರಸಾರ 1,400 ರಿಂದ 21,000 ಕ್ಕೆ ಏರಿತು. ಉನ್ನತ ಮಟ್ಟದ ಲೇಖನಗಳು, ನವೀನ ಆಕರ್ಷಕ ಶೀರ್ಷಿಕೆಗಳ ಪ್ರಕಟಣೆ, ದಕ್ಷ, ಆಡಳಿತ ನಿರ್ವಹಣೆ, ಪ್ರಸಾರ ವಿಸ್ತಾರ, - ಈ ಅಂಶಗಳಿಗೂ ವಿಶೇಷ ಗಮನ ಕೊಡುವುದೇ ಗುಪ್ತರ ಯಶಸ್ಸಿನ ಗುಟ್ಟು. `ನನ್ನ ಪ್ರಜಾಮತ ಜೀವನ ಮುಗಿದುಹೋಗಿ ರಾಜಕೀಯದಿಂದ ದೂರವಾಗಿ ಬಹಳ ಕಾಲವಾಯಿತು. ಹಿಂದಿವಾಂಛೆಯಿಂದ ಮತ್ತೆ ಪತ್ರಿಕೋದ್ಯಮ ಆರಂಭಿಸಿದ್ದೇನೆ. ಮಹಾಜನರು ಪ್ರೋತ್ಸಾಹಿಸಬೇಕು.' ಎಂದು ಗುಪ್ತರು ಸಂಪಾದಕೀಯದಲ್ಲಿ ಬರೆದಿದ್ದರು. ಮಹಾಜನರ ಪ್ರೋತ್ಸಾಹ ಲಭಿಸಿತು.
ಬಿ.ಎನ್. ಗುಪ್ತರು ಜನಪ್ರಗತಿಯಲ್ಲಿ ಬರೆಯತೊಡಗಿದ ಅಯ್ಯಪ್ಪನ ಚಾವಡಿ ಅಂಕಣ ವಿಶೇಷವಾಗಿ ಜನಪ್ರಿಯವಾಯಿತು. ಬ್ರಿಟಿಷರ ಕಾಲದ ರಾಜಕೀಯ ಪರಿಸ್ಥಿತಿ ಆಗ ಇರಲಿಲ್ಲ. ಜನಸಾಮಾನ್ಯನ ಭಾಷೆಯಲ್ಲೇ, ತಿಳಿಯಾದ ಹಾಸ್ಯದಿಂದ ಕೂಡಿದ ಮಾರ್ಮಿಕ ಮಾತುಗಳಿಂದ ಮೂಡಿಸಿದ ಚುಚ್ಚು ವಿಶ್ಲೇಷಣೆ ಅದರ ಮುಖ್ಯ ಗುಣ. ರಾಜಕೀಯದ ಒಳಹೊರಗನ್ನು ಅರಿತ ಅಯ್ಯಪ್ಪನವರು ಗಮಾರನಾದ, ಆದರೆ ರಾಜಕೀಯ ಪ್ರಜ್ಞೆಯುಳ್ಳ. ಬೋರನ ಜೊತೆ ಸಂವಾದ ನಡೆಸುವ ವೈಖರಿಯೇ ಅಂಕಣದ ಸ್ವಾರಸ್ಯಕ್ಕೆ ಕಾರಣ. ರಾಷ್ಟ್ರದ ವಿವಿಧ ವಿದ್ಯಮಾನಗಳ ಹಿಂದಿನ ವ್ಯಕ್ತಿಶಕ್ತಿಗಳ ಪ್ರವರ್ತನೆಯ ಹಿನ್ನಲೆ ಹಾಗೂ ವಿಶ್ಲೇಷಣೆಗಳನ್ನೊದಗಿಸುವ ಲೇಖನಮಾಲೆಯಾದ ಭಾರತ ದರ್ಶನ ಜನಪ್ರಗತಿಯ ಇನ್ನೊಂದು ಸ್ಥಿರ ಶೀರ್ಷಿಕೆ. ಭಾರತ ರಾಜಕೀಯದ ಹಾಗೆಯೇ ವಿಶ್ವದ ವಾರ್ತೆ ಹಾಗೂ ವಿದ್ಯಾಮಾನಗಳ ವಿಶ್ಲೇಷಣೆ ಲೋಕ ಸಪ್ತಾಹದಲ್ಲಿ ಇರುತ್ತಿತ್ತು. ಈ ಮೂರೂ ಸ್ಥಿರ ಶೀರ್ಷಿಕೆಗಳು ಕಥೆ, ಕವನ ಮುಂತಾದ ಸಾಮಗ್ರಿಯ ಜೊತೆಗೂಡಿ ವಾಚಕರ ಗಮನ ಸೆಳೆದವು.
ಜನಮನದಲ್ಲಿ ಎಲ್ಲ ವಿಷಯಗಳ ಬಗ್ಗೆ ಒಂದು ಅಭಿಪ್ರಾಯ ಅಸ್ಪಷ್ಟವಾಗಿ ಮೂಡಿರುತ್ತದೆ. ಪತ್ರಿಕೆಯ ಬರೆಹ ಆ ಜನಾಭಿಪ್ರಾಯಕ್ಕೆ ಮಾತುಕೊಡುವಂತಿರಬೇಕು ಎಂಬ ಧ್ಯೇಯ ಜನಪ್ರಗತಿಯ ಸಂಪಾದಕರದಾಗಿತ್ತು. ಜನಪ್ರಗತಿ ವಾಚಕರ ಅಭಿರುಚಿಯನ್ನು ಕುದುರಿಸಿತ್ತು. ಗುಪ್ತರ ಜನಪ್ರಗತಿಯ ಪ್ರಸಾರದ ಬಹುಭಾಗ ಗ್ರಾಮೀಣ ಪ್ರದೇಶಗಳಲ್ಲಿದ್ದುದು ಅರ್ಥಪೂರ್ಣ. ಗುಪ್ತರ ಸಂಪಾದಕತ್ವದ ವೈಶಿಷ್ಟ್ಯವೇ ಎನ್ನುವಂತೆ ಅವರ ಬರೆಹಗಳು ಪ್ರಜಾಪ್ರಭುತ್ವದಲ್ಲಿ ಅಧಿಕಾರೂಢರಾದವರಿಗೂ ಚುರುಕು ಮುಟ್ಟಿಸುತ್ತಿತ್ತು.

ವೃದ್ಧಾಪ್ಯ ಆವರಿಸಿ ಆರೋಗ್ಯ ಕೆಟ್ಟಿದ್ದರಿಂದ ಗುಪ್ತರು ವ್ಯಾಪಾರ ವ್ಯವಹಾರಗಳನ್ನೂ ಪತ್ರೀಕೋದ್ಯಮವನ್ನೂ ಬಿಟ್ಟುಕೊಟ್ಟರು. ಪ್ರಥಮ ಬಾರಿಗೆ ಮೂರು ತಿಂಗಳು ಪತ್ರಿಕೆ ನಡೆಸಲಾಗದೆ ಹೋದ ಪ್ರಸಂಗ ಬಂದಾಗ 1971ರ ಜನವರಿ 1ರಂದು ಕಲ್ಲೆ ಎನ್. ಶಿವೋತ್ತಮರಾವ್ ಅವರಿಗೆ ಅದನ್ನು ವಹಿಸಿಕೊಟ್ಟರು.

	ಕಲ್ಲೆಯವರ ಸಂಪಾದಕತ್ವದಲ್ಲಿ ಜನಪ್ರಗತಿಯ ಓಘಕ್ಕೆ ಒಂದು ತಿರುವು ಬಂತು. ಜೀವನದ ನಾನಾ ಕ್ಷೇತ್ರಗಳಲ್ಲಿ ಪಟ್ಟಭದ್ರವಾಗಿರುವ, ಏಕಸ್ವಾಮ್ಯ ಸಾಧಿಸಕೊಂಡಿರುವ ಶಕ್ತಿ-ವ್ಯಕ್ತಿಗಳನ್ನು ಚುಚ್ಚು ಲೇಖನಿಗೆ, ದಿಟ್ಟೆದೆಯ ಮೊನಚು ಮಾತಿಗೆ ತುತ್ತಾಗಿಸುವುದು ಗುಪ್ತರ ಅನಂತರ ಕಾಲದ ಜನಪ್ರಗತಿಯ ವೈಶಿಷ್ಟ್ಯ. 1978ರ ವರೆಗೆ ಪ್ರಕಟವಾಗುತ್ತಿತ್ತು.          (ಎಸ್.ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ